FILM REVIEW: ಒಳ್ಳೇ 'ದಾಮಾಯಣ' ಆಯ್ತು ಮಾರಾಯರೆ!!
ಸಿನೆಮಾದ ಆರಂಭದಲ್ಲೇ ಇದು ಒಬ್ಬ "ದಾರಿತಪ್ಪಿದ ಮಗ " ನ ಸುತ್ತ ಗಿರಕಿ ಹೊಡೆಯುವ ಕಥೆ ಎ೦ದು ಎಂಥವರಿಗೂ ಅರ್ಥವಾಗುತ್ತದೆ. ದಾಮೋದರ ಎಂಬ ನಾಮಾಂಕಿತ ಯುವಕನು ಸಕಲ ದುರ್ಗುಣ ಸಂಪನ್ನನಾಗಿರುತ್ತಾನೆ. ಅವನೊಬ್ಬ ಅವಿವೇಕಿ, ಪೆದ್ದ, ಸೋಮಾರಿ, ದುಶ್ಚಟಗಳ ದಾಸ, ಬೇಜವಾಬ್ದಾರಿಯುಳ್ಳವ, ಅಸಹಾಯಕ, ದಂಡ ಪಿಂಡ, ಸ್ವಂತ ಬುದ್ಧಿಹೀನ, ಮೊಬೈಲ್ ದಾಸ, ಅವಿದ್ಯಾವಂತ, ಹಳ್ಳಿಗುಗ್ಗು, ಕೆಲವೊಮ್ಮೆ ಅತಿ ಬುದ್ಧಿವಂತ. ಹೀಗೆ ದಾಮೋದರ ನ ವಿರಾಟ್ ರೂಪವನ್ನು ತೋರಿಸುವ ಪ್ರಯತ್ನ ಸ್ವ೦ತ ನಿರ್ದೇಶನದಲ್ಲಿ ನಟಿಸಿ ಶ್ರೀ ಶ್ರೀಮುಖ ತಮ್ಮ ಮುಖೇನ ಮಾಡಿದ್ದಾರೆ. ನೇರ ಕೆಲಸದ ಹಣಸಂಪಾದನೆಯ ಕನಸು ಕಾಣುವವನಿಗೆ ತನ್ನ ವಿದ್ಯಾರ್ಹತೆಯ ಕನಿಷ್ಟ ಜ್ಞಾನವಿರುವುದಿಲ್ಲ. ಮೈಕ್ರೊಸಾಪ್ಟ ಸ್ಥಾಪಕನಿಗೆ ಡಿಗ್ರಿ ಆಗ್ಲಿಲ್ಲದ ವಿಷಯ ಮುಂದಿಡುತ್ತಾ ಮುಂದಡಿಯಿಡುತ್ತಾ ಸಾಗುತ್ತಾನೆ.ಫೇಸ್ ಬುಕ್ ನಲ್ಲಿ ಮೊಬೈಲ್ ನಲ್ಲಿ ಮುಳುಗಿದ ವ್ಯಕ್ತಿಗೆ Friend spelling ಗೊತ್ತಿರುವುದಿಲ್ಲ. ಮಿತ್ರ ವಿನಾಯಕನ ಎದುರು ಉತ್ತರ ಕುಮಾರನಂತೆ ಪೌರುಷ ಪರಾಕ್ರಮ ತೋರುವವನು ಉದ್ಯೋಗನಿಮಿತ್ತ job interview ನಲ್ಲಿ ತೀರಾ ಪೆದ್ದನಾಗುತ್ತಾನೆ. ಹೀಗೆ ವಿವಿಧ ವ್ಯಕ್ತಿತ್ವಗಳ ಚಿತ್ರಣದ ಚಿತ್ರೀಕರಣ ದ ಮಧ್ಯೆ ದಾಮೋದರನ ನಟನಾ ಸಾಮರ್ಥ್ಯ ನೋಡುಗರ ಮೆಚ್ಚುಗೆ ಗಳಿಸುತ್ತದೆ.
ಸದಾ ಸಿಡುಕುವ ಅಪ್ಪನ ಮೂಲಕ ಹಳ್ಳಿಯ ನೆಮ್ಮದಿಯ ಜೀವನ ಮರೆಮಾಚಿದಂತಾಗಿದೆ. ಆಕಾಶವಾಣಿ ಕಲಾವಿದೆ ಗಾಯಕಿ ಡಾ| ಪ್ರತಿಭಾ ರೈ ಹಳ್ಳಿಯ ಅಮ್ಮನಂತೆ ಕಾಣದಿದ್ದರೂ ತಾನು ಅಭಿನಯದಲ್ಲೂ ಸೈ ಎನಿಸುವಷ್ಟು ಚೆನ್ನಾಗಿ ನಟಿಸಿದ್ದಾರೆ. ಮೊದಲರ್ಧದಲ್ಲಿ ದಾಮೋದರ ನಟನೆ ಪ್ರೇಕ್ಷಕರ ಮುಖದಲ್ಲಿ ನಗು ಬರಿಸಿದರೆ ಉತ್ತರಾರ್ಧದಲ್ಲಿ ಅವನ ಅವಸ್ಥೆ ಕಂಡು ಅಯ್ಯೋ ಪಾಪ ಎನ್ನದವರಿಲ್ಲ.
ಹೋದಲ್ಲಿ ಬಂದಲ್ಲಿ ಆಗಾಗ ಸಿಕ್ಕುವ ಜನರೇ ಸಿಗುವುದು,ಮಂಗಳೂರಿನಂಥ ನಗರದಲ್ಲಿ ಸಾವಿರಾರು ಆಟೋಗಳಿದ್ದರೂ ಅದೇ ಆಟೋ ಆಗಾಗ ಸಿಗುವುದು ಹಳೇ ಕನ್ನಡ ಚಿತ್ರಗಳನ್ನು ನೆನಪಿಸುತ್ತದೆ. ವಿನಾಯಕ ಪಾತ್ರಧಾರಿ ತನ್ನ ಪಾತ್ರಕ್ಕೆ ಮುಗ್ಧತೆಯ ನಟನೆಯ ಮೂಲಕ ಜೀವ ತುಂಬಿ ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ದಾರಿ ತಪ್ಪಿದ ಮಗಳು ವಿದ್ಯಾ ಪಾತ್ರದ ಹಿನ್ನೆಲೆ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು. ಪ್ರೀತಿ ಪ್ರೇಮ ಎಷ್ಟು ಬೇಗ ಆವಿರ್ಭವಿಸುತ್ತದೆಯೋ ಅಷ್ಟೇ ಬೇಗ ಮಾಯವಾಗುತ್ತದೆ. ಅಶ್ಲೀಲತೆಯ ಲವಲೇಶವಿಲ್ಲದ ಕುಟುಂಬ ಸಮೇತ ನೋಡಬಹುದಾದ ಸಿನಿಮಾದಲ್ಲಿ ಧೂಮಪಾನ ಮದ್ಯಪಾನವನ್ನು ತೋರಿಸದಿದ್ದರೆ ಏನೂ ನಷ್ಟವಾಗುತ್ತಿರಲಿಲ್ಲ. ಕೊನೆಯಲ್ಲಿ ಬರುವ ದಾಮಾಯಣ ಹಾಡು, ನೃತ್ಯ ಚೆನ್ನಾಗಿದ್ದರೂ ನೋಡುವವರಾರೂ ಥಿಯೇಟರ್ ಒಳಗೆ ಇರಲಿಲ್ಲ.
ಸಿನಿಮಾದ ವಿವರ ಹೀಗಿದೆ: ಚಿತ್ರಕಥೆ-ನಿರ್ದೇಶನ: ಶ್ರೀಮುಖ, ನಿರ್ಮಾಣ: ರಾಘವೇಂದ್ರ ಕುಡ್ವ, ಬ್ಯಾನರ್: ಸೆವೆಂಟಿ 7 ಸ್ಟುಡಿಯೋಸ್. ಪಾತ್ರವರ್ಗ: ಶ್ರೀಮುಖ, ಅನಘಾ, ಆದಿತ್ಯ ಬಿ.ಕೆ., ಅಕ್ಷಯ್ ರೇವಣಕರ್, ಡಾ. ಪ್ರತಿಭಾ, ಪ್ರಣೀತ್ ನೀನಾಸಂ, ವೆಂಕಟರಾಮ ಭಟ್, ಪದ್ಮಪ್ರಸಾದ್ ಜೈನ್, ಪ್ರವೀಣ್ ವೆಲಂಕರ್. ಸಂಗೀತ: ಕೀರ್ತನ್ ಬಾಳಿಲ. ಹಿನ್ನೆಲೆ ಸಂಗೀತ: ಕೀರ್ತನ್ ಬಾಳಿಲ, ಪ್ರವೀಣ್ ವೆಲಂಕರ್.ಡಿಒಪಿ: ಸಿದ್ದು ಜಿ.ಎಸ್. ಸಂಭಾಷಣೆ: ಶ್ರೀಮುಖ ಸಾಹಿತ್ಯ : ಶ್ರೀಮುಖ, ವೆಂಕಟರಾಮ ಭಟ್, ಶಶಿಕಿರಣ್ ಆನೇಕರ್. ಎಡಿಟಿಂಗ್: ಕಾರ್ತಿಕ್ ಕೆ.ಎಂ., ವರ್ಣ : ಕಾರ್ತಿಕ್ ಮುರಳಿ, ಧನುಷ್ ಎಲ್.ಬೇದ್ರೆ, ನೃತ್ಯ ಸಂಯೋಜನೆ: ಧೀರಜ್ ಡಿ ಕಾಂಚನ್, ಕಾರ್ಯಕಾರಿ ನಿರ್ಮಾಪಕ: ಅಕ್ಷಯ್ ರೇವಣಕರ್, ಡಬ್ಬಿಂಗ್ ಮತ್ತು ಸೌಂಡ್ ರೆಕಾರ್ಡಿಂಗ್ : ಉಮೇಶ್ ಮಿನ್ನಂಡ - ಸ್ಟುಡಿಯೋ ಅನನ್ಯ (ಬೆಂಗಳೂರು), ಧ್ವನಿ ವಿನ್ಯಾಸ ಮತ್ತು ಮಿಶ್ರಣ : ಶ್ರೀಕಾಂತ್ ಶ್ರೀನಿವಾಸ್ - ಡೈಜಿ ವರ್ಲ್ಡ್ ಆಡಿಯೋ ವಿಷುಯಲ್ ಸ್ಟುಡಿಯೋ (ಮಂಗಳೂರು), ಪ್ರಚಾರ ವಿನ್ಯಾಸ : ಅಶೋಕ್ ಚಕ್ರವರ್ತಿ ಪಿ, ಪೋಸ್ಟರ್ ಸ್ಟಿಲ್ಸ್: ಪೀಕಾಬೂ ಸ್ಟುಡಿಯೋಸ್, ಡ್ರೋನ್: ಪ್ರಣೀತ್ ಎಂ.ಬಿ., PRO : ಸುಧೀಂದ್ರ ವೆಂಕಟೇಶ್, ಅಸೋಸಿಯೇಟ್ ಡೈರೆಕ್ಟರ್: ಅಕ್ಷಯ್ ರೇವಣಕರ್, ಸಹಾಯಕ ನಿರ್ದೇಶಕರು: ನಿತಿನ್ ಭಾರದ್ವಾಜ್, ಮಹೇಶ್ ಕದಂ, ಸ್ವಸ್ತಿಕ್ ಕರೆಕ್ಕಾಡ್, ಕೃಷ್ಣ, ಜ್ಞಾನೇಶ್ ಪ್ರಚಾರ ಕಾರ್ಯನಿರ್ವಾಹಕ: ದಿಶಾಂತ್ ಎಂ ಉಳ್ಳಾಲ್, ದಾಖಲೀಕರಣ ಮತ್ತು ಸ್ಕ್ರಿಪ್ಟಿಂಗ್: ಮಧುಮತಿ ಭಟ್, ಲೈನ್ ಪ್ರೊಡ್ಯೂಸರ್: ರಮೇಶ್ ಕುಡ್ವ, ಪ್ರಮೋದ್, ಮಾರ್ಕೆಟಿಂಗ್ ಮತ್ತು ವಿತರಣೆ : ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್,