SCHOOL: ಕನ್ನಡ ಶಾಲೆ ಉಳಿಸಿದ ಹಿರಿಯ ವಿದ್ಯಾರ್ಥಿಗಳು: ಎರಡೇ ತಿಂಗಳಲ್ಲಿ ಮೂರು ಪಟ್ಟು ಮಕ್ಕಳು

SCHOOL: ಕನ್ನಡ ಶಾಲೆ ಉಳಿಸಿದ ಹಿರಿಯ ವಿದ್ಯಾರ್ಥಿಗಳು: ಎರಡೇ ತಿಂಗಳಲ್ಲಿ ಮೂರು ಪಟ್ಟು ಮಕ್ಕಳು

 


ಕನ್ನಡ ಮಾಧ್ಯಮ ಶಾಲೆಯಾದ ವಿಟ್ಲ ಸಮೀಪದ ಕೆಲಿಂಜದ ಸರಕಾರಿ ಶಾಲೆಯಲ್ಲಿ ಕೇವಲ 24 ಮಕ್ಕಳು ಮೊನ್ನೆ ಮಾರ್ಚ್ ತಿಂಗಳಲ್ಲಿದ್ದರು. ಈಗ ಶಾಲೆಗೆ 79 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ಬದಲಾವಣೆಗೆ ಹಿರಿಯ ವಿದ್ಯಾರ್ಥಿಗಳು ನಡೆಸಿದ ದಿಢೀರ್ ‘ಕಾರ್ಯಾಚರಣೆ’ ಕಾರಣ. ಶಾಲೆ ಮಕ್ಕಳಿಗೆ ಉಚಿತ ವಾಹನ, ಇಬ್ಬರು ಶಿಕ್ಷಕಿಯರ ನೇಮಕ, ಅವರಿಗೆ ಗೌರವಧನ, ಎಲ್.ಕೆ.ಜಿ. ತರಗತಿ ಆರಂಭ, ಸ್ಪೋಕನ್ ಇಂಗ್ಲೀಷ್ ಕೋರ್ಸ್ ಹೀಗೆ ಹಿರಿಯ ವಿದ್ಯಾರ್ಥಿಗಳೇ ಆಗಿರುವ ಊರಪರವೂರವರನ್ನು ಸೇರಿಸಿ, ದೊಡ್ಡ ಮೊತ್ತದ ಧನಸಂಗ್ರಹಿಸಿ, ಅದನ್ನು ಪೂರ್ತಿ ಶಾಲೆ ಬಳಕೆಗೆಂದೇ ಮೀಸಲಿರಿಸುವ ಕಾರ್ಯವನ್ನು ಕೇವಲ ಎರಡೇ ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ.

ಕಲ್ಲಡ್ಕ ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ವಿಟ್ಲ ತಲುಪುವ ಮೊದಲು ರಸ್ತೆ ಬದಿಯಲ್ಲೇ ಇರುವ ಕೆಲಿಂಜದ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ ಇದು.

ಕನ್ನಡ ಕಲಿಸುವ ಸರಕಾರಿ ಶಾಲೆಯಲ್ಲಿ ಇಂಥ ದಿಢೀರ್ ಬೆಳವಣಿಗೆ ಹಿಂದೆ ಬೆನ್ನೆಲುಬಾಗಿ ನಿಂತ ಹಿರಿಯ ವಿದ್ಯಾರ್ಥಿಗಳ ತನು, ಮನ ಜೊತೆಗೆ ಧನದ ಕೊಡುಗೆ ಇದೆ. ಶಾಲೆ ಮುಚ್ಚುವ ಭೀತಿಯಲ್ಲಿದ್ದಾಗ, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಸುಮಾರು ಹತ್ತು ಮಂದಿ ಒಂದು ಭಾನುವಾರ ಒಟ್ಟು ಸೇರಿ ಶಾಲೆ ಉಳಿಸುವ ತೀರ್ಮಾನ ಕೈಗೊಂಡರು. ಬಳಿಕ ಸಭೆಗಳು ನಡೆದವು. ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡಿತು. ಕೆ.ಎಂ.ರಫೀಕ್ ಗುಳಿಗದ್ದೆ ಗೌರವಾಧ್ಯಕ್ಷರಾಗಿ, ಎನ್.ಹಮೀದ್ ಜಿ.ಎಸ್. ಉಪಾಧ್ಯಕ್ಷರಾಗಿ, ಸಂತೋಷ್ ಶೆಟ್ಟಿ ಸೀನಾಜೆ ಕಾರ್ಯದರ್ಶಿಯಾಗಿ, ದೇವಪ್ಪ ಗೌಡ ಕೆಲಿಂಜ ಕೋಶಾಧಿಕಾರಿಯಾಗಿ ತಂಡವೇ ಸಿದ್ಧಗೊಂಡಿತು. ಇವರು ಶಾಶ್ವತ ನಿಧಿಯೊಂದನ್ನು ರಚಿಸಿದರು. 1 ಲಕ್ಷ ರೂ, 50 ಸಾವಿರ ರೂ ಸಹಿತ ದೊಡ್ಡ, ಸಣ್ಣ ಮೊತ್ತದ ದೇಣಿಗೆ ಕೂಡಿಸಿದರು. ನೋಡನೋಡುತ್ತಿದ್ದಂತೆ 25 ಲಕ್ಷ ರೂಗಳ ಮೊತ್ತವಾಯಿತು. ಬಳಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನವೊಂದನ್ನು ಮಾಡಿ ಗಮನ ಸೆಳೆದರು.  ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜಯಂತಿ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಹಿರಿಯ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.

ಉಚಿತ ಸಾರಿಗೆ ಜೊತೆ ಏನೆಲ್ಲಾ ಕೊಡುಗೆ?

ಶಾಲೆಗೆ ಆಗಮಿಸಲು ಎರಡು ಆಟೊರಿಕ್ಷಾಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಇದು ಉಚಿತ. ಪ್ರತ್ಯೇಕ ಸಮವಸ್ತ್ರ, ನೋಟ್ ಪುಸ್ತಕ, ಸ್ಪೋಕನ್ ಇಂಗ್ಲೀಷ್, ಗೌರವ ಶಿಕ್ಷಕರಿಗೆ ವೇತನ, ಮೇಜು ಕುರ್ಚಿ, ಶುದ್ಧ ಕುಡಿಯುವ ನೀರಿನ ಘಟಕ, ಸುಸಜ್ಜಿತ ಬಿಸಿಯೂಟದ ಕೊಠಡಿ ಹೀಗೆ ಶಾಲೆಗೆ ಪೂರಕವಾದವುಗಳನ್ನೆಲ್ಲಾ ಒದಗಿಸಿದರು. ಹೀಗಾಗಿಯೇ ಎಲ್.ಕೆ.ಜಿ. ಸೇರಿ ಒಟ್ಟು 79 ವಿದ್ಯಾರ್ಥಿಗಳು ಈಗ ವ್ಯಾಸಂಗ ಮಾಡುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಶಾಲೆ ಉಳಿಸಲು ಕಾರ್ಯೋನ್ಮುಖರಾಗಿದ್ದೇವೆ. ಸುಮಾರು 25 ಲಕ್ಷ ರೂಗಳಷ್ಟು ದೇಣಿಗೆಯಿಂದ ಮಕ್ಕಳ ಕರೆತರಲು ಉಚಿತ ವಾಹನ, ಇಬ್ಬರು ಶಿಕ್ಷಕಿಯರ ನೇಮಕ ಸಹಿತ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ನಾವು ಕಲಿತ ಶಾಲೆ ಎಂಬ ಪ್ರೀತಿಯಿಂದ ನಾಡಿನ ವಿವಿಧೆಡೆ ಇರುವ ಹಿರಿಯ ವಿದ್ಯಾರ್ಥಿಗಳು ಸ್ಪಂದಿಸಿದ್ದಾರೆ ಎನ್ನುತ್ತಾರೆ ಸಂಘದ ಪದಾಧಿಕಾರಿಗಳು






Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ