SUCCESS: ಕರಾವಳಿಯಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಯಶಸ್ವಿಯಾದ ಉದ್ಯಮಿ
‘’ಹೇಳಿಕೇಳಿ ದಕ್ಷಿಣ ಕನ್ನಡವೆಂದರೆ, ಮಳೆಯಲ್ಲೇ ತೋಯ್ದುಹೋಗುವ ಜಾಗ. ಇಲ್ಲಿ ಮರುಭೂಮಿಯ ಬೆಳೆ
ಡ್ರ್ಯಾಗನ್ ಫ್ರುಟ್ ಬೆಳೆಸುವುದೆಂದರೆ ಹೇಗೆ, ಅದು ಸಾಧ್ಯವಾ’’
ಇಂಥ ಪ್ರಶ್ನೆಗಳನ್ನೆಲ್ಲ ಎದುರಿಸಿ ಅದು ಸಾಧ್ಯ ಎಂಬುದನ್ನು
ನಿರೂಪಿಸಿದವರು ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ
ಕುರಿಯಾಳ ಗ್ರಾಮದ ನೋರ್ನಡ್ಕಪಡು ಎಂಬಲ್ಲಿ ಹದಿನಾಲ್ಕು ಎಕರೆ ಜಾಗದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ
ಅವರು ಇದನ್ನು ಬೆಳೆಸಿದ್ದಾರೆ. ಬೆಳೆ ಮಾರಾಟ ಮಾಡಿ ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ.
ಅನುಭವ
ಹಂಚಿಕೊಂಡ ಚಂದ್ರಹಾಸ ಶೆಟ್ಟಿ, ಇದಕ್ಕೆ ಪ್ರಾಣಿಗಳ ಕಾಟವಿಲ್ಲ, ನವಿಲು ಇಲ್ಲೆಲ್ಲಾ ಓಡಾಡುತ್ತಿದ್ದರೂ
ಹಣ್ಣಿನ ಹತ್ತಿರ ಬರುವುದಿಲ್ಲ. ರೋಗ ಇಷ್ಟರವರೆಗೆ ಬಂದಿಲ್ಲ. ಕೇವಲ ಹಟ್ಟಿಗೊಬ್ಬರವಷ್ಟೇ ಹಾಕಿರುವೆ,
ಯಾವುದೇ ರಾಸಾಯನಿಕ ಹಾಕದೆ ಬೆಳೆಸಿ, ಉತ್ತಮ ಫಲಸೂ ಬಂದಿದೆ ಎಂದರು.
ಲಾಕ್ ಡೌನ್ ನಲ್ಲಿ ನೋಡಿದ
ವಿಡಿಯೋ ಪ್ರೇರಣೆಯಾಯ್ತು:
ಲಾಕ್ ಡೌನ್ ಸಂದರ್ಭ ಯೂಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನೆಲ್ಲಾ
ನೋಡುತ್ತಿದ್ದ ಸಂದರ್ಭ ಬೆಂಗಳೂರಿನ ಯಲಹಂಕದಲ್ಲಿ ಶ್ರೀನಿವಾಸ ರೆಡ್ಡಿ ಎಂಬವರು ಇದನ್ನು ಬೆಳೆದದ್ದನ್ನು
ಗಮನಿಸಿದೆ. ನಮ್ಮ ಜಾಗದಲ್ಲೂ ನೆಟ್ಟೆ. 1 ವರ್ಷ ಮೂರು ತಿಂಗಳು ಆಯಿತು. ಮೂರು ತಿಂಗಳಲ್ಲಿ ಫಸಲು ಬಂದಿದೆ.
ಇದುವರೆಗೆ 5 ಟನ್ ಡ್ರ್ಯಾಗನ್ ಫ್ರುಟ್ ಬೆಳೆಸಿದ್ದೇನೆ. ಇನ್ನು ಮೂರು ಟನ್ ಇಳುವರಿ ಬರುವ ನಿರೀಕ್ಷೆ
ಇದೆ. 1 ಸಾವಿರ ಕಂಬಗಳಲ್ಲಿ 4 ಸಾವಿರ ಗಿಡ ನೆಟ್ಟಿದ್ದೇನೆ ಎಂದರು. ನಮ್ಮ ದಕ್ಷಿಣ ಕನ್ನಡದಲ್ಲಿ ಇಷ್ಟು
ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಇಲ್ಲ. ಇದಕ್ಕೆ ಕೆಲಸ ಕಾರ್ಯಗಳು ಕಡಿಮೆ. ಕಳೆದ ವರ್ಷ 500 ಕಂಬಗಳಲ್ಲಿ
2 ಸಾವಿರ ಗಿಡ ನೆಟ್ಟಿದ್ದೆ ಎಂದರು.ಎಪ್ರಿಲ್ ಕೊನೆಗೆ ಹೂವು ಆರಂಭವಾದರೆ, ನವೆಂಬರ್ ಕೊನೆಯಲ್ಲಿ ಹಣ್ಣು
ದೊರಕುತ್ತದೆ. ಈ ಗಿಡ 30 ವರ್ಷ ಬಾಳಿಕೆ ಬರುತ್ತದೆ ಎನ್ನುತ್ತಾರೆ ಶೆಟ್ಟರು.
ಡ್ರ್ಯಾಗನ್ ಫ್ರುಟ್ ಬೆಳೆದು
ಉತ್ತಮ ಆದಾಯವನ್ನೂ ಗಳಿಸಬಹುದು
ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನಕ್ಕೂ ಇದು ಹೊಂದಿಕೆ ಆಗುತ್ತದೆ
ಎಂಬುದು ಈಗ ನಿರೂಪಿತವಾಗಿದೆ. ಕುರಿಯಾಳ ಗ್ರಾಮದ ನೋರ್ನಡ್ಕಪಡು ಎಂಬಲ್ಲಿರುವ ಚಂದ್ರಹಾಸ ಶೆಟ್ಟಿ ಅವರ
ಜಮೀನಿನಲ್ಲಿ ಡ್ರ್ಯಾಗನ್ ಫ್ರುಟ್ ಈಗ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಸಾಮಾನ್ಯವಾಗಿ ಉಷ್ಣಹವೆಯಲ್ಲಿ
ಬೆಳೆಯುವ ಈ ಹಣ್ಣು ಒಂದೂವರೆ ವರ್ಷದಲ್ಲೇ ಬೆಳೆದು ಉತ್ತಮ ಆದಾಯವನ್ನೂ ಒದಗಿಸಿದೆ. 20 ದಿನಕ್ಕೊಮ್ಮೆ
ಹೂವು ಬಿಡುವ ಇದರ ಖರ್ಚು ಒಂದೂವರೆ ಎಕರೆಗೆ ಏಳುವರೆ ಲಕ್ಷ ರೂ. ಒಂದು ಹಣ್ಣು ಸಾಧಾರಣ 750 ಗ್ರಾಂ
ತೂಕವಿರುತ್ತದೆ. ಶೆಟ್ಟರು ಇಟ್ಟ ಹಣ್ಣಿನ ತೋಟ ಆರ್ಥಿಕವಾಗಿಯೂ ಲಾಭ ನೀಡಿರುವುದು ಹೀಗೆ. ಸುಮಾರು
3 ಲಕ್ಷ ರೂಪಾಯಿಯ ಹಣ್ಣು ಮಾರಾಟವಾಗಿದ್ದರೆ, ಇನ್ನೂ ನಾಲ್ಕು ಲಕ್ಷ ರೂಪಾಯಿಯ ಹಣ್ಣು ದೊರಕಬಹುದು ಎನ್ನುತ್ತಾರೆ
ಅವರು.