YANTRASHREE: ಭತ್ತ ಬೆಳೆಗಾರರಿಗೆ ಉತ್ತೇಜನ ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಯಂತ್ರಶ್ರೀ’ ಯೋಜನೆ: ಏನಿದರ ವಿಶೇಷ
ರಾಜ್ಯದೆಲ್ಲೆಡೆ ಇರುವ ದಕ್ಷಿಣ ಕನ್ನಡದ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಯಂತ್ರಶ್ರೀ’ ಕೃಷಿಯಿಂದ ವಿಮುಖವಾಗುವವರಿಗೆ
ಹೊಸ ಸಾಧ್ಯತೆಗಳನ್ನು ಪರಿಚಯಿಸಿದೆ. ವಿಶೇಷವಾಗಿ ಭತ್ತ ಬೆಳೆಗಾರರಿಗೆ ಉತ್ತೇಜನ ನೀಡಲು ಈ ಯೋಜನೆ ಸಹಕಾರಿಯಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಆಯಾ ಕಾಲಮಾನ, ಭೌಗೋಳಿಕ ಹಿನ್ನೆಲೆಗೆ ಅನುಗುಣವಾಗಿ ಕೃಷಿಕರು ತಮ್ಮ ಬೆಳೆಗಳನ್ನು
ಬೆಳೆಸಲು ಕೂಲಿ ಕಾರ್ಮಿಕರ ಕೊರತೆಯಿಂದ ಹಿಂದೇಟು ಹಾಕುವ ಸಂದರ್ಭ ಯೋಜನೆಯ ಯಂತ್ರಶ್ರೀ ಯೋಜನೆ ಮೂಲಕ
ಅವರನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ. ವಿಶೇಷವಾಗಿ ಕರಾವಳಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ
ಹಾಗೂ ಇತರ ಸಮಸ್ಯೆಗಳಿಂದ ಗದ್ದೆ ಇದ್ದರೂ ಭತ್ತ ಬೆಳೆಯಲು ಹಿಂದೇಟು ಹಾಕುವವರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಭೂಮಿಯನ್ನು ಭತ್ತದ ಕಣಜವನ್ನಾಗಿಸಲು ನೆರವು
ನೀಡುವ ಕಾರ್ಯಕ್ಕೆ ಹೊರಟಿಡುವ ಯೋಜನೆಗೆ ಸ್ಥಳೀಯ ರೈತರು ಸಾಥ್ ನೀಡುತ್ತಿದ್ದಾರೆ.
ಭತ್ತ ಕೃಷಿ ಮಾಡುವ ರೈತರು ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿಯನ್ನೇ ಕೈಬಿಡುವ ಯೋಚನೆಯನ್ನು
ಮಾಡಬಾರದು ಎಂಬ ನಿಟ್ಟಿನಲ್ಲಿ ಯಂತ್ರಶ್ರೀ ಯೋಜನೆ ಮೂಲಕ ಕೃಷಿ ಯಂತ್ರೋಪಕರಣಗಳ ಮೂಲಕ ಭತ್ತ ಕೃಷಿಗೆ
ಸಂಬಂಧಿಸಿದ ಪೂರಕ ಚಟುವಟಿಕೆಗಳಿಗೆ ನೆರವಾಗುವುದು ಯೋಜನೆಯ ಉದ್ದೇಶ. ಇದಕ್ಕಾಗಿ ಯೋಜನೆಯ ಕೃಷಿ ಅಧಿಕಾರಿಗಳು
ಹಾಗೂ ಯಂತ್ರಶ್ರೀ ಕಾರ್ಯಕರ್ತರು ರೈತರಿಗೆ ಮಾಹಿತಿಯನ್ನು ನೀಡುವುದರ ಮೂಲಕ ಇದರಿಂದ ರೈತರಿಗೆ ಆಗುವ
ಲಾಭಗಳನ್ನು ವಿವರಿಸುತ್ತಾರೆ.
ನಾಟಿ ಕೆಲಸ ಆರಂಭ:
ಈಗಾಗಲೇ ಯೋಜನೆಯ ಮೂಲಕ ನಾಟಿ ಕೆಲಸಗಳು ಆರಂಭಗೊಂಡಿವೆ. ಗದ್ದೆ ಉಳುವ ಟ್ರ್ಯಾಕ್ಟರ್, ನೇಜಿ
ನಾಟಿ ಯಂತ್ರ, ಕಟವು ಯಂತ್ರಗಳು ಫೀಲ್ಡಿಗಿಳಿದಿದೆ. ವಿವಿಧ ಯೋಜನಾ ಕಚೇರಿಯ ವ್ಯಾಪ್ತಿಯ ಕೃಷಿ ಅಧಿಕಾರಿಗಳು
ಮಾರ್ಗದರ್ಶನ ನೀಡುತ್ತಿದ್ದಾರೆ. ಸುಮಾರು 13 ರೂಪಾಯಿ ಇರುವ ನೇಜಿ ಹಾಕುವ ತಟ್ಟೆಗಳನ್ನು ಯೋಜನೆಯ ಸಹಾಯಧನದ
ಮೂಲಕ 4 ರೂಪಾಯಿಗೆ ನೀಡುತ್ತಿದೆ. ಗದ್ದೆ ಉಳುವ ಹಾಗೂ ನಾಟಿ ಯಂತ್ರಗಳನ್ನು ರೈತರಿಗೆ ಮಿತದರದಲ್ಲಿ
ಒದಗಿಸುತ್ತಿದ್ದಾರೆ. ಕೃಷಿ ಮಾಡಿದವರಿಗೆ ಪ್ರತಿ ಹಂತದಲ್ಲೂ ಸೂಕ್ತ ಸಲಹೆ ನೀಡಲು ಎರಡು ಯೋಜನಾ ಕಚೇರಿ
ವ್ಯಾಪ್ತಿಯಲ್ಲಿ 8 ಮಂದಿ ಯಂತ್ರಶ್ರೀ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ಇದ್ದಾರೆ. ಇದರ ಜೊತೆಗೆ
ಎರಡು ಯೋಜನಾ ಕಚೇರಿ ವ್ಯಾಪ್ತಿಯ ಯೋಜನೆಯ ಮೇಲ್ವಿಚಾರಕರು, ಒಕ್ಕೂಟಗಳ ಸೇವಾ ಪ್ರತಿನಿಧಿಗಳು ಕಾರ್ಯನಿರತರಾಗಿದ್ದಾರೆ.
ಹಡೀಲು ಬಿದ್ದ ಗದ್ದೆ ಗುರುತಿಸುವ ಕಾರ್ಯ
ಅಗತ್ಯ
ಭತ್ತ ಕೃಷಿ ಕೈಬಿಡಲು ನಾನಾ ಕಾರಣಗಳಲ್ಲಿ ಕೂಲಿ ಕಾರ್ಮಿಕರ ಕೊರತೆಯೂ ಒಂದು. ನೀರಿನ ಸಮಸ್ಯೆಯೂ
ಮತ್ತೊಂದು. ಜೊತೆಗೆ ಪ್ರಾಣಿ, ಪಕ್ಷಿಗಳ ಉಪಟಳವೂ ಇರುತ್ತದೆ. ಹೀಗಾಗಿ ಪರ್ಯಾಯ ಕೃಷಿಯನ್ನು ಅವರು ಅವಲಂಬಿಸುತ್ತಾರೆ
ಅಥವಾ ಜಾಗವನ್ನು ಹಡೀಲು ಬಿಡುತ್ತಾರೆ. ಇಂಥ ಜಾಗವನ್ನು ಗುರುತಿಸುವ ಕಾರ್ಯವನ್ನು ಸಂಘ, ಸಂಸ್ಥೆಗಳು
ಮಾಡಬೇಕಾಗಿದ್ದು, ಗ್ರಾಮಕ್ಕೊಂದು ಹಡೀಲು ಭೂಮಿಯನ್ನು ಆಯ್ಕೆ ಮಾಡಿ ಅದರಲ್ಲಿ ಭತ್ತ ಬೆಳೆದರೆ, ಕರಾವಳಿ
ಭತ್ತ ಬೆಳೆಯಲ್ಲಿ ಸ್ವಾವಲಂಬಿಯಾಗಬಹುದು ಎಂದು ಸ್ಥಳೀಯ ರೈತರು ಅಭಿಪ್ರಾಯಪಡುತ್ತಾರೆ.
ಮಳೆ ಪ್ರಾರಂಭವಾಗಲು ವಿಳಂಬವಾಗಿದ್ದರೂ ಬಳಿಕ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ
ಕೂಲಿ ಕಾರ್ಮಿಕರ ಕೊರತೆಯಾಗದಂತೆ ಯಂತ್ರೋಪಕರಣಗಳ ನೆರವನ್ನು ನೀಡುವ ಕಾರ್ಯ ಮಾಡಲಾಗಿದೆ. ಇದಕ್ಕೆ ರೈತರೂ
ಪೂರಕವಾಗಿ ಸ್ಪಂದಿಸಿದ್ದಾರೆ. ಕೆಲವೊಂದು ಹೊಸ ರೈತರೂ ಇದಕ್ಕೆ ಸೇರಿಕೊಂಡಿದ್ದಾರೆ. ನಮ್ಮ ಯೋಜನೆಯ
ಕೃಷಿ ಅಧಿಕಾರಿಗಳು ಮತ್ತು ಯಂತ್ರಶ್ರೀ ಯೋಧರು ಇದಕ್ಕಾಗಿ ಹಲವು ಸಮಯಗಳಿಂದ ತಯಾರಿ ನಡೆಸಿದ್ದು, ಕೃಷಿಕರಿಗೆ
ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಗಿದೆ. ಇದರ ಮಹತ್ವವನ್ನು ಅವರಿಗೆ ವಿವರಿಸಲಾಗಿದ್ದು,
ರೈತರ ಉತ್ತಮ ಸ್ಪಂದನೆ ಇದೆ ಅಧಿಕಾರಿಗಳು.