PROFILE: ಉಡುಪಿಯಲ್ಲಿದ್ದಾರೆ ಕನ್ನಡ ಕೀಬೋರ್ಡ್ ವಿನ್ಯಾಸಕ ಕೆ.ಪಿ.ರಾವ್ - ಅವರ ಸಾಧನೆಗಳ ಪರಿಚಯ ಇಲ್ಲಿದೆ

PROFILE: ಉಡುಪಿಯಲ್ಲಿದ್ದಾರೆ ಕನ್ನಡ ಕೀಬೋರ್ಡ್ ವಿನ್ಯಾಸಕ ಕೆ.ಪಿ.ರಾವ್ - ಅವರ ಸಾಧನೆಗಳ ಪರಿಚಯ ಇಲ್ಲಿದೆ

 

ನೀವು ಕಂಪ್ಯೂಟರ್ ಎದುರು ಕುಳಿತು ಕೀಬೋರ್ಡ್ ನಲ್ಲಿ ಕನ್ನಡದ ಫಾಂಟ್ ಅನ್ನು ಸಲೀಸಾಗಿ ಟೈಪ್ ಮಾಡಬೇಕಾದರೆ, ಅದರ ಹಿಂದೆ ಹಲವರ ಶ್ರಮ ಅಡಗಿದೆ. ಅಂಥವರಲ್ಲಿ ಮೊದಲ ಸಾಲಲ್ಲಿ ನಿಲ್ಲುತ್ತಾರೆ ಕಿನ್ನಿಕಂಬಳ ಪದ್ಮನಾಭ ರಾವ್. ಇವರ ಹೆಸರಿನದ್ದೇ ಕೆ.ಪಿ.ರಾವ್ ಲಿಪಿ ಇದೆ.

ಕಿನ್ನಿಕಂಬಳ ಪದ್ಮನಾಭ ರಾವ್ (ಫೆಬ್ರವರಿ 29, 1940), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಕೆ. ಪಿ. ರಾವ್ ಅವರ ಸಾಧನೆ.

1940ರ ಫೆಬ್ರುವರಿ 29ರಂದು ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ ಜನಿಸಿದ ರಾವ್ ಅವರು ಅಲ್ಲೇ. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು. ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಮಾಡಿದ್ದಾರೆ. 1959ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದರು.

ಬಳಿಕ ವಿವಿಧೆಡೆ ಅವರು ಉದ್ಯೋಗಕ್ಕಾಗಿ ತೆರಳಿದ್ದರು. ಮೊದಲಿಗೆ ಮುಂಬೈನ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ (ಟಿ.ಐ.ಎಫ್.ಆರ್.) ನಲ್ಲಿ ಅಣುಶಕ್ತಿ ವಿಭಾಗದ ಸಂಶೋಧಕರಾಗಿ ಕೆಲಸ ಮಾಡಿದರು. 1970ರಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭವಾಯಿತು. ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ - ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ ಕೆಲಸ ಮಾಡಿದರು. ಬಳಿಕ ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.

ಉಡುಪಿಯವರಾದ ಪತ್ನಿ ನಿರ್ಮಲಾ ಅವರನ್ನು 1964ರಲ್ಲಿ ವಿವಾಹವಾದರು. ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳ ಸುಖೀ ಸಂಸಾರ ಇವರದ್ದು.

ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿ:

ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ. ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ ಇವರದ್ದು.

ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ ಕೆ.ಪಿ.ರಾವ್ ಅವರಿಗೆ ದೊರಕಿದೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸನ್ಮಾನ ದೊರಕಿದೆ. ಆಳ್ವಾಸ್ ನುಡಿಸಿರಿ 20098ರಲ್ಲಿ ಸನ್ಮಾನ, .2013ರಲ್ಲಿ ವಿಶ್ವಕರ್ಮ ಪ್ರಶಸ್ತಿ. 2013ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ. 2013ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ "ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್" ಪ್ರಕಟಣೆ. 2013ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ರಾವ್ ಅವರಿಗೆ ದೊರಕಿದೆ.2021ರಲ್ಲಿ 'ಕಾರಂತ ಬಾಲವನ ಪ್ರಶಸ್ತಿ'  ದೊರಕಿದೆ. ರಾವ್ ಅವರು 'ವರ್ಣಕ' ಎಂಬ ಕಾದಂಬರಿಯನ್ನು ಬರೆದಿದ್ದಾರೆ.2021ರಲ್ಲಿ ಅಂಕಿತ ಪ್ರಕಾಶನದಿಂದ ಇದು ಪ್ರಕಟಗೊಂಡಿದೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ