Tradition: ಬಂಟ್ವಾಳದ ಪೂಜಾ ನವರಾತ್ರಿ ವೇಳೆ ಬ್ಲ್ಯಾಕ್ ಟೈಗರ್!!
Report: Yadav Kulal Agrabail
ತನ್ನ ಹಿರಿಯರು ಜನಪದ ಕಲೆಯಾಗಿ ಹುಲಿವೇಷವನ್ನು ಹಾಕಿ ಕುಣಿಯುವದನ್ನು ಬೆರಗುಗಣ್ಣಿನಿಂದ ನೋಡುತ್ತಾ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಅಪ್ಪನಿಂದಲೇ ಅದನ್ನು ಕಲಿತು ಒಂದನೇ ತರಗತಿಯಿಂದಲೇ ಮರಿಹುಲಿಯಾಗಿ ಕುಣಿದು ಜನರ ಮನಸ್ಸನ್ನು ಗೆದ್ದು ಸತತ 14 ವರ್ಷಗಳಿಂದ ವೇಷ ಮಾಡುತ್ತಾ ಬಂದಿರುವ 22ರ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೈರಾನ್
ಪಾದೆಯ ಪೂಜಾ. ಈಕೆ ಬ್ಲ್ಯಾಕ್ ಟೈಗರ್ ಎಂದೇ ಹೆಸರುವಾಸಿ.
ಮೈರಾನ್ಪಾದೆಯಲ್ಲಿ ಬಿ. ರತ್ನಾಕರ ಸಾಲ್ಯಾನ್ರವರು ಗೆಳೆಯರ ಬಳಗ ಮೈರಾನ್ಪಾದೆ ಎಂಬ ಹುಲಿವೇಷದ ತಂಡವನ್ನು ಕಟ್ಟಿ ಬೆಳೆಸಿದವರು. ಇವರು ಮಗಳು ಪೂಜಾ ತಂದೆಯ ಜೊತೆ ಒಂದನೇ ತರಗತಿಯಿಂದಲೇ ಬಣ್ಣ ಹಾಕಲು ಅಭ್ಯಾಸ ಮಾಡಿದ್ದಾರೆ. ತಂದೆಯ ಜೊತೆ ಹುಲಿ ವೇಷದ ಹೆಜ್ಜೆಗಾರಿಕೆ, ತಮಟೆಗೆ ತಕ್ಕಂತೆ ಕುಣಿತ, ತಂದೆ ಹುಲಿ ಜೊತೆ ಕುಣಿತ, ಇಬ್ಬರು ಅಥವಾ ಮೂರು ಜನ ಹಿಡಿದು ಜಂಪಿಂಗ್, ಹೀಗೆ ಬಗೆ ಬಗೆಯಲ್ಲಿ ಕುಣಿದು ತಮ್ಮ ಅಭಿಮಾನಿ ಬಳಗಕ್ಕೆ ಮನೋರಂಜನೆಯನ್ನು ನೀಡುತ್ತಿದ್ದಾರೆ.
ಹುಲಿವೇಷಧಾರಿಯಾಗಿ ಗೋವಾ, ಬೆಂಗಳೂರು, ತುಮಕೂರು, ಶ್ರೀ ರಾಜರಾಜೇಶ್ವರಿ ಕ್ಷೇತ್ರ ಪೊಳಲಿ, ಮೆರ್ಲಪದವು, ಬೆದ್ರ ಫ್ರೆಂಡ್ಸ್, ಮಾರಿಗುಡಿ ಫ್ರೆಂಡ್ಸ್ ಬೆದ್ರ ಕೂಳೂರು, ಪಾಂಡೇಶ್ವರ, ಮಂಕಿಸ್ಟ್ಯಾಂಡ್ (ಮಂಗಳೂರು), ಕಕ್ಕೆಪದವು, ಪುತ್ತೂರು ಮುಂತಾದ ಕಡೆ ಪ್ರದರ್ಶನವನ್ನು ನೀಡಿರುವ ಪೂಜಾ ಬ್ಲ್ಯಾಕ್ ಟೈಗರ್ ಆಗಿಯೇ ಸದ್ದು ಮಾಡಿದವರು..2019ರಲ್ಲಿ ಬಿರುವೆರ್ ಕುಡ್ಲ ವತಿಯಿಂದ ನಡೆದ ಪಿಲಿಗೊಬ್ಬು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನದ ಶ್ಲಾಘನೆಗೆ ಪಾತ್ರರಾಗಿದ್ದಾರೆ. ತನ್ನ 17ನೇ ವರ್ಷದಿಂದ ಇಲ್ಲಿಯವರೆಗೆ ಬ್ಲ್ಯಾಕ್ ಟೈಗರ್ ಹುಲಿವೇಷಧಾರಿಯಾಗಿ ಅದ್ಭುತ ಹುಲಿಕುಣಿತ ಪ್ರದರ್ಶನ ನೀಡುತ್ತಿದ್ದಾರೆ.