INSPIRATION: ಮೀನು ಹಿಡಿಯಲು ಹೋದವನು ಸತ್ತೇ ಬಿಟ್ಟಿದ್ದನು ಎಂದು ಭಾವಿಸಿದ್ದರು!!...ಎರಡು ದಿನ ಸಮುದ್ರದಲ್ಲೇ ಕಳೆದ ಮುರುಗನ್ ಕತೆ ಇದು..
ಹರೀಶ ಮಾಂಬಾಡಿ
ಇದು ಆಕಸ್ಮಿಕವಾದ ಈಜಾದರೂ ಬದುಕುವ ಛಲವಿದ್ದರೆ, ಧೈರ್ಯವಿದ್ದರೆ ಸಾಧಿಸಬಹುದು ಎಂಬುದರ
ನಿದರ್ಶನ. ತಮಿಳುನಾಡು ಮೂಲದ ಮುರುಗನ್ ಎಂಬಾತನೇ ಈ ಸಾಹಸಿ. ಬರೋಬ್ಬರಿ 43 ಗಂಟೆಗಳ ಕಾಲ
ಸಮುದ್ರದಲ್ಲಿ ಈಜಿ ಬದುಕಿ ಬಂದ ಮೀನುಗಾರನ ಸಾಹಸದ ಕತೆ ಇದು. ಹೆಚ್ಚುಕಮ್ಮಿ ಎರಡು ದಿನಗಳ ಕಾಲ
ಈಜಾಡಿದ ವಿಚಾರ ಸಣ್ಣದೇನಲ್ಲ.
ಆಯತಪ್ಪಿ ಅರಬ್ಬಿ ಸಮುದ್ರಕ್ಕೆ ಬಿದಿದ್ದ ಮೀನುಗಾರ ಈಜುತ್ತಾ ಬರುತ್ತಿರುವುದನ್ನು ಬೈಂದೂರು
ತಾಲೂಕಿನ ಗಂಗೊಳ್ಳಿ ಮೂಲದ ಸಾಗರ್ ಬೋಟ್ನ ಮೀನುಗಾರು ರಕ್ಷಿಸಿದರು.
ಮುರುಗನ್ ಸತ್ತೇ ಬಿಟ್ಟಿದ್ದನೆಂದು
ಭಾವಿಸಿದ್ದರು!!
ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ಬೋಟಿನಿಂದ ಆಯತಪ್ಪಿ ಈತ ಬಿದ್ದಿದ್ದ.
ತಮಿಳುನಾಡಿನ ಎಂಟು ಮಂದಿಯ ತಂಡವಿದು. ಆಳಸಮುದ್ರ ಮೀನಗಾರಿಕೆಗೆ ಅರಬ್ಬೀ ಸಮುದ್ರಕ್ಕೆ
ಇಳಿದಿದ್ದರು. ಈ ತಂಡದಲ್ಲಿ ಇದ್ದ ಮುರುಗನ್ ಎಂಬಾತ ಶನಿವಾರ ರಾತ್ರಿ ಮೂತ್ರವಿಸರ್ಜನೆಗೆಂದು ಬೋಟ್
ನ ಅಂಚಿಗೆ ಹೋಗಿದ್ದಾನೆ. 25 ವರ್ಷದ ಈ ಮೀನುಗಾರ,
ಈ ಸಂದರ್ಭ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾನೆ. ಆದರೆ ಈ ಘಟನೆ ಉಳಿದ ಮೀನುಗಾರರಿಗೆ
ತಿಳಿಯುವುದಿಲ್ಲ. ಕತ್ತಲಿನ ಹೊತ್ತು, ಕೆಲವರು ನಿದ್ದೆಗೆ ಜಾರಿಯೂ ಆಗಿತ್ತು. ಆದರೂ ಎಷ್ಟು
ಹೊತ್ತಾದರೂ ಮುರುಗನ್ ಒಳಗೆ ಬಾರದೇ ಇದ್ದುದನ್ನು ಗಮನಿಸಿದ ಉಳಿದವರು ಬೋಟಿನಲ್ಲಿ ಮುರುಗನ್ ಇಲ್ಲ
ಎಂಬುದನ್ನು ತಿಳಿದುಕೊಳ್ಳುತ್ತಾರೆ. ಸಮುದ್ರಕ್ಕೆ ಬಿದ್ದಿರಬಹುದು ಎಂಬ ಶಂಕೆ ಅದಾಗಲೇ ಅವರಿಗೆ
ಮೂಡುತ್ತದೆ. ಕೂಡಲೇ ಹುಡುಕಾಟ ಆರಂಭಿಸುತ್ತಾರೆ. ಎರಡು ದಿನ ಕಳೆದರೂ ಮುರುಗನ್
ಪತ್ತೆಯಾಗುವುದಿಲ್ಲ. ಕೊನೆಗೆ ತಮ್ಮ ಮಾಲೀಕನಿಗೆ ಮುರುಗನ್ ಮೃತಪಟ್ಟಿದ್ದಾನೆ ಎಂಬ
ಅನುಮಾನವಿರುವುದಾಗಿ ತಿಳಿಸುತ್ತಾರೆ.
ಸಾಗರ್ ಬೋಟ್ ಮೀನುಗಾರರಿಗೆ ಕಂಡ
ಮುರುಗನ್!!
ಆದರೆ ಮುರುಗನ್ ಛಲ ಬಿಟ್ಟಿರುವುದಿಲ್ಲ. ಧೈರ್ಯಗೆಡುವುದಿಲ್ಲ. ಈಜುತ್ತಾ, ಈಜುತ್ತಾ,
ತೆರಳುತ್ತಿರುತ್ತಾನೆ. ನವೆಂಬರ್ 10ರಂದು ಸಾಗರ್ ಬೋಟ್ ಮೀನುಗಾರರು, ಮೀನುಗಾರಿಕೆಗೆ ಸಮುದ್ರಕ್ಕೆ
ಇಳಿಯುತ್ತಾರೆ. ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ
ನಡೆಸುತ್ತಿದ್ದ ಸಂದರ್ಭ ಮುಳುಗೇಳುವಂತೆ ಕಾಣುತ್ತಿದ್ದ ಮುರುಗನ್ ಕಾಣಸಿಗುತ್ತಾನೆ. ಆದರೆ
ಅಸ್ಪಷ್ಟವಾಗಿ ಆತ ಕಾಣುತ್ತಿರುವ ಹಿನ್ನೆಲೆಯಲ್ಲಿ ಅದು ಮೀನು ಎಂದು ಭಾವಿಸುತ್ತಾರೆ. ಮೀನು ಅಂದುಕೊಂಡು ಮುರುಗನ್ ಬಳಿ ಹೋದಾಗ, ಮನುಷ್ಯನೆಂದು ತಿಳಿಯುತ್ತದೆ.
ಕೊನೆಗೆ ಗಂಗೊಳ್ಳಿ ಮೀನುಗಾರರು ಮುರುಗನ್ನನ್ನು ರಕ್ಷಣೆ ಮಾಡುತ್ತಾರೆ. ಜೀವ ಉಳಿಸಿಕೊಳ್ಳಲು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಮುರುಘನ್ ನಿತ್ರಾಣಗೊಂಡಿದ್ದ
ಹಿನ್ನೆಲೆಯಲ್ಲಿ ಆತನಿಗೆ ಉಪಚರಿಸಲಾಗುತ್ತದೆ. ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಮುರುಘನ್ ಕೊನೆಗೂ ಪವಾಡಸದೃಶವಾಗಿ ಬದುಕಿ ಬರುತ್ತಾನೆ. ಗಂಗೊಳ್ಳಿ ಮೀನುಗಾರರು ಪ್ರಥಮ ಚಿಕಿತ್ಸೆ ನೀಡಿ ಬದುಕಿಸುತ್ತಾರೆ. ಸಮುದ್ರಕ್ಕೆ ಬಿದ್ದು ಮುರುಗನ್ ಮೃತಪಟ್ಟಿದ್ದಾನೆ ಎಂದು ಶವ ಹುಡುಕುತ್ತಿದ್ದ ತಮಿಳುನಾಡಿನ ಮೀನುಗಾರರ ತಂಡಕ್ಕೆ ಈತ ಬದುಕಿದ್ದನ್ನು ಕಂಡು ಆಶ್ಚರ್ಯವಾಗುತ್ತದೆ. ಬಳಿಕ ಗಂಗೊಳ್ಳಿ ಮೀನುಗಾರರು ಮುರುಗನ್ನನ್ನು ತಮಿಳುನಾಡು ಮೀನುಗಾರರಿಗೆ ಒಪ್ಪಿಸಿದ್ದಾರೆ. ಈ
ರೋಚಕ ವಿಚಾರವೀಗ ಮೀನುಗಾರರ ವ ಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಧೈರ್ಯ, ಸಾಹಸವಿದ್ದರೆ,
ಎಂಥದ್ದೂ ಸಾಧಿಸಬಹುದು ಎಂಬುದಕ್ಕೆ ಮುರುಗನ್ ಉದಾಹರಣೆಯಾಗಿ ನಿಲ್ಲುತ್ತಾನೆ