DIGP: ಪಶ್ಚಿಮ ವಲಯಕ್ಕೆ ನೂತನ ಡಿಐಜಿಪಿ: ಡ್ರಗ್ಸ್ ಕೋಮುವಾದ ವಿರುದ್ಧ ಮುಲಾಜಿಲ್ಲದೆ ಕಾರ್ಯಾಚರಣೆಗೆ ನಿರ್ಧಾರ
ಪಶ್ಚಿಮ ವಲಯಕ್ಕೆ ನೂತನ ಡಿಐಜಿಪಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ: ಡ್ರಗ್ಸ್ ಕೋಮುವಾದ ವಿರುದ್ಧ ಮುಲಾಜಿಲ್ಲದೆ ಕಾರ್ಯಾಚರಣೆಗೆ ನಿರ್ಧಾರ
ಒಂದೆಡೆ ಮಾದಕ ದ್ರವ್ಯ ವ್ಯಸನಿಗಳ ಗುರುತಿಸುವಿಕೆ,
ಪೆಡ್ಲರ್ ಗಳಿಗೆ ಬಲೆ ಹಾಕುವುದು ಸಹಿತ ಡ್ರಗ್ಸ್ ದಂಧೆಯನ್ನು ಬೇರು ಸಹಿತ ಕಿತ್ತು ಹಾಕಲು ದಕ್ಷಿಣ
ಕನ್ನಡ ಜಿಲ್ಲೆ ಹಾಗೂ ಮಂಗಳೂರು ಸಿಟಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ಉಪ
ಪೊಲೀಸ್ ಮಹಾನಿರೀಕ್ಷಕರಾಗಿ ಅಮಿತ್ ಸಿಂಗ್, ಕಾರ್ಯಭಾರ ಸ್ವೀಕರಿಸಿದ್ದಾರೆ.
ಡ್ರಗ್ಸ್, ಕೋಮುವಾದದ ರೀತಿಯಂಥ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುತ್ತದೆ ಎಂದು ಅಧಿಕಾರ ಸ್ವೀಕರಿಸಿದ ಕೂಡಲೇ ಪಶ್ಚಿಮ ವಲಯ ನೂತನ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿಪಿ) ಅಮಿತ್ ಸಿಂಗ್ ಹೇಳಿದ್ದಾರೆ.
ಸದ್ಯ ಅಪರಾಧ ಕೃತ್ಯದ ಸ್ವರೂಪವೇ ಬದಲಾಗಿದೆ. ಕಳವಿಗಿಂತಲೂ ಡ್ರಗ್ಸ್, ಆರ್ಥಿಕ ಅಪರಾಧ, ಸೈಬರ್ ಅಪರಾಧದಂತಹ 'ವೈಟ್ ಕಾಲರ್ ಅಪರಾಧಗಳು ಅಧಿಕವಾಗುತ್ತಿದೆ. ಇಂತಹ ಕೃತ್ಯಗಳನ್ನು ಬೇಧಿಸುವುದೇ ಪೊಲೀಸರಿಗೆ ಸವಾಲಿನ ಸಂಗತಿ. ಹತ್ತು ವರ್ಷಗಳ ಹಿಂದಿನ ಅಪರಾಧಕ್ಕೂ ಈಗಿನ ಅಪರಾಧಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೋಮುವಾದದಂತಹ ಕೃತ್ಯಗಳಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣದ ವಿರುದ್ಧವೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ. ಸೈಬರ್ ಅಪರಾಧಗಳ ಬಗ್ಗೆ ಜನತೆ ಸಾಕಷ್ಟು ಜಾಗರೂಕರಾಗಬೇಕು ಎಂದು ಅಮಿತ್ ಸಿಂಗ್, ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ತಿಳಿಸಿದ್ದಾರೆ. 2007ನೇ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿರುವ ಅಮಿತ್ ಸಿಂಗ್ ಅವರು 2009-2011 ವರೆಗೆ ಎಎಸ್ಪಿಯಾಗಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು. 2011ರಿಂದ ಹಾಸನ, ಕಲಬುರಗಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ನಾಲ್ಕು ವರ್ಷಗಳಲ್ಲಿ ಎನ್ಐಎಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಪಶ್ಚಿಮ ವಲಯ ನೂತನ ಉಪ ಪೊಲೀಸ್ ಮಹಾನಿರೀಕ್ಷಕರಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.