KK ಖ್ಯಾತ ಗಾಯಕ ಕೆಕೆ ಸಾವು, ಭಾರತದಾದ್ಯಂತ ಕಂಬನಿ, ನಡೆದದ್ದೇನು?
ಹಾಡುಗಾರ ಕಾಣಿಸಬಾರದು, ಹಾಡುಗಳು ಕೇಳಿಸಬೇಕು...
ಹೀಗೆಂದು ಪ್ರತಿಪಾದಿಸಿದ ಭಾರತದ ಪ್ರಮುಖ ಹಾಡುಗಾರ ಕೆಕೆ ಇನ್ನಿಲ್ಲ.
ಕೃಷ್ಣಕುಮಾರ್ ಕುನ್ನತ್ (ಕೆಕೆ) ಕಾರ್ಯಕ್ರಮ ನೀಡಿ ಸ್ವಲ್ಪ ಹೊತ್ತಿನಲ್ಲಿಯೇ ಮೇ 31ರ ರಾತ್ರಿ ದಿಢೀರನೆ ಕುಸಿದುಬಿದ್ದು ಕೋಲ್ಕತ್ತಾದಲ್ಲಿ ನಿಧನ ಹೊಂದಿದ್ದಾರೆ. ಕೆಕೆ (KK) ಎಂದೇ ಜನಪ್ರಿಯರಾಗಿದ್ದ ಅವರು ಲೈವ್ ಕಾರ್ಯಕ್ರಮದ ಬಳಿಕ ಕುಸಿದು ಬಿದ್ದು ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಲಿವುಡ್ ಸಹಿತ ಭಾರತದ ಚಿತ್ರಜಗತ್ತಿನ ಗಣ್ಯರು ಸಂತಾಪ ಸೂಚಿಸಿದ್ದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 53 ವರ್ಷದ ಕೆಕೆ ಹೇಗೆ ಸಾವನ್ನಪ್ಪಿದರು ಎಂಬುದರ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಅವರು ಕಾರ್ಯಕ್ರಮ ನೀಡಿದ ಸಭಾಂಗಣದ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಒಂದು ಮೂಲಗಳ ಪ್ರಕಾರ ಕೆಕೆ ಕುಸಿದು ಬಿದ್ದಿದ್ದರು ಹೀಗಾಗಿ ಅವರಿಗೆ ಏಟಾಗಿತ್ತು ಎಂದು ಹೇಳಲ್ಪಟ್ಟರೆ, ಇನ್ನೊಂದು ಮೂಲಗಳು ಅವರಿಗೆ ಹೃದಯಸ್ತಂಭನವಾಗಿದ್ದ ಕಾರಣ ಸಾವನ್ನಪ್ಪಿದರು ಎನ್ನಲಾಗುತ್ತಿದೆ. ಯಾವುದಕ್ಕೂ ಪೋಸ್ಟ್ ಮಾರ್ಟಂ ಉತ್ತರ ಹೇಳಬೇಕು.
23, ಆಗಸ್ಟ್ 1968ರಲ್ಲಿ ಜನಿಸಿದ ಕೃಷ್ಣಕುಮಾರ್ ಕುನ್ನತ್, ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆದರೆ 1999ರಲ್ಲಿ ಎ.ಆರ್.ರೆಹಮಾನ್ ಅವರ ಪಲ್ ಆಲ್ಬಂ ಅವರಿಗೆ ದೊಡ್ಡ ಹೆಸರು ಕೊಟ್ಟಿತು. ಬಳಿಕ ಅವರು ಯಶಸ್ಸಿನ ಮೆಟ್ಟಿಲೇರಿದರು. ಕ್ಯಾ ಮುಜೇ ಪ್ಯಾರ್ ಹೇ, ಆಂಖೋ ಮೆ ತೆರಿ, ಖುದಾ ಜಾನೆ, ಪಿಯಾ ಆಯೆ ನಾ, ಜೊ ಜೋ ಮಿಲಾ, ಅಪಡಿ ಪೋಡಿ, ಡೋಲಾ ರೆ.. ಹೀಗೆ ಹಿಂದಿ, ತಮಿಳುಗಳ ಜನಪ್ರಿಯ ಹಾಡುಗಳಲ್ಲಿ ಕೆಕೆ ಧ್ವನಿ ಇದೆ. ಹೀಗಾಗಿಯೇ ಅವರಿಗೆ ಆರು ಫಿಲ್ಮ್ ಫೇರ್ ಪ್ರಶಸ್ತಿಗಳು ದೊರಕಿವೆ.