MOVIE: ಸೂಪರ್ ಫ್ಲಾಪ್ ಧಾಕಡ್ ಮೂಲಕ 'ಸದ್ದು' ಮಾಡಿದ ಕಂಗನಾ - ಥಿಯೇಟರ್ ಗೆ ಯಾರೂ ಬರಲಿಲ್ಲವೇಕೆ?
ಅತ್ತ ಯಶ್ ಅಭಿನಯದ ಕೆಜಿಎಫ್ ಹಿಂದಿ ಭಾಷಿಕರ ಮನವನ್ನೂ ಗೆದ್ದಿದ್ದರೆ, ಇತ್ತ ಬಾಲಿವುಡ್ ನ ಲೇಡಿ ಹೀರೋ ಎಂಬಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ ಕಂಗನಾ ರಾನಾವತ್ ನಟಿಸಿದ ಚಿತ್ರ ದಯನೀಯವಾಗಿ ಸೋಲುವ ಮೂಲಕ ಸುದ್ದಿಯಾಗುತ್ತಿದೆ. Action, Thriller Movie ಎಂದೇ ಹೇಳಲಾಗುತ್ತಿರುವ ಸೋತದ್ದೇಕೆ ಎಂದು ಸ್ವತಃ ಕಾಂಟ್ರೋವರ್ಸಿ ಮೂಲಕವೇ ಸುದ್ದಿಯಾಗುವ ಕಂಗನಾಗೂ ಗೊತ್ತಾಗಿಲ್ಲ.
ತನ್ನ ಹೇಳಿಕೆಗಳ ಮೂಲಕವೇ ಪ್ರತಿದಿನ ಸುದ್ದಿಯಾಗುತ್ತಿದ್ದ ಕಂಗನಾ ರಾನಾವತ್ ನಟಿಸಿದ ಧಾಕಡ್ ತನ್ನ ಟ್ರೇಲರ್ ಮೂಲಕ ಭಾರಿ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆದರೀಗ ಬಾಲಿವುಡ್ ನ ಬಾಕ್ಸ್ ಆಫೀಸ್ ನಲ್ಲಿ ದುರಂತ ಅಂತ್ಯ ಕಂಡಿದೆ. ಅರ್ಜುನ್ ರಾಮ್ ಪಾಲ್, ಕಂಗನಾ ರಾನಾವತ್, ದಿವ್ಯಾ ದತ್ತಾ , ಸಸ್ವತಾ ಚಟರ್ಜಿ ನಟಿಸಿದ ಈ ಸಿನಿಮಾವನ್ನು ರಜನೀಶ್ ಘನಿ ನಿರ್ದೇಶಿಸಿದ್ದರು. ಮೇ 20ರಂದು ವಿಶ್ವದಾದ್ಯಂತ ತೆರೆ ಕಂಡಿತ್ತು. ಆದರೆ ಸಿನಿಮಾಕ್ಕೆ ಜನರೇ ಬಾರದ ಕಾರಣ ಹೆಚ್ಚಿನ ಕಡೆಗಳಲ್ಲಿ ವಾರದೊಳಗೇ ಸಿನಿಮಾ ಥಿಯೇಟರ್ ಗಳಿಂದ ಕಣ್ಮರೆಯಾಗಿದೆ. ಬಿಡುಗಡೆಯಾದ ಎಂಟನೇ ದಿನ ಕೇವಲ 20 ಟಿಕೇಟುಗಳಷ್ಟೇ ಮಾರಾಟವಾಗಿದ್ದು, 4,420 ರೂಪಾಯಿಯಷ್ಟೇ ಕಲೆಕ್ಷನ್ ಆಗಿದ್ದು ಇದೀಗ ಭಾರೀ ಸದ್ದು ಮಾಡುತ್ತಿದೆ.
ಧಾಕಡ್ ಜೊತೆಗೆ ರಿಲೀಸ್ ಆಗಿದ್ದ ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಬುಲಯ್ಯಾ 2 ಗೆ ಜನರು ಬರುತ್ತಿದ್ದರೆ, ಕಂಗನಾ ಸೂಪರ್ ಹೀರೋಯಿನ್ ಆಗಿ ಅಭಿನಯಿಸಿದ ಧಾಕಡ್ ಗೆ ಯಾರೂ ಇಲ್ಲ ಎಂಬುದು ಸದಾ ಬಾಲಿವುಡ್ ಮಂದಿಯನ್ನು ಛೇಡಿಸುತ್ತಿದ್ದ ಕಂಗನಾ ಗೀಗ ನುಂಗಲಾರದ ತುತ್ತಾಗಿದೆ.
ಒಂದು ವರದಿಯ ಪ್ರಕಾರ, ದಿನಕ್ಕೊಂದು ಹೇಳಿಕೆ, ಅದರಲ್ಲೂ ವಿವಾದಾಸ್ಪದ ಹೇಳಿಕೆಗಳನ್ನು ನೀಡುವುದು, ಮತ್ತದನ್ನು ಬೋಲ್ಡ್ ಹೇಳಿಕೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದ ಕಂಗನಾಗೆ ತನ್ನ ವಿವಾದಗಳೇ ಸಿನಿಜರ್ನಿಗೆ ಮುಳುವಾಯಿತು ಎನ್ನಲಾಗುತ್ತಿದೆ. ಡೈಲಾಗ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ಪಡೆದ ಇಮೇಜ್ ನಯಾಪೈಸೆ ಪ್ರಯೋಜನಕ್ಕೆ ಬಂದಿಲ್ಲ ಎಂಬುದು ಸತತ 9 ಫ್ಲಾಪ್ ಗಳನ್ನು ನೀಡಿರುವ ಕಂಗನಾಗೆ ಅರ್ಥವಾಗಿರಬಹುದು ಎಂದು ನೆಟ್ಟಿಗರು ಛೇಡಿಸುತ್ತಿದ್ದಾರೆ!!