POLITICS: ದ್ರೌಪದಿ ಮುರ್ಮು ಅವರಿಗೆ ಉದ್ಧವ್ ಠಾಕ್ರೆ ಬೆಂಬಲ ಕೊಡಲು ಯಾಕೆ ಯೋಚಿಸಿದ್ದಾರೆ?
Monday, July 11, 2022
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಠಾಕ್ರೆ ನೇತೃತ್ವದ ಶಿವಸೇನೆ ಬೆಂಬಲ ಬಹುತೇಕ ಫೈನಲ್?
ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ. ಅಭ್ಯರ್ಥಿ ದ್ರೌಪದಿ ಮುರ್ಮುಗೆ ಎನ್.ಡಿ.ಎ.ಯಲ್ಲಿ ಇಲ್ಲದಿದ್ದ ಪಕ್ಷಗಳೂ ಬೆಂಬಲ ಸೂಚಿಸುತ್ತಿದ್ದು, ಇದೀಗ ತನ್ನ ಸರ್ಕಾರ ಪತನಕ್ಕೆ ಕಾರಣ ಎಂದು ವಾಗ್ದಾಳಿ ನಡೆಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಭವ್ ಠಾಕ್ರೆ ಎನ್.ಡಿ.ಎ. ಅಭ್ಯರ್ಥಿಗೆ ಬೆಂಬಲ ಸೂಚಿಸುವ ನಿರ್ಧಾರ ಮಾಡಿರುವ ಕುರಿತು ಅಂತಿಮಗೊಳಿಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ನೇತೃತ್ವದಲ್ಲಿ ಶಿವಸೇನೆಯ 40 ಶಾಸಕರು ಬಂಡಾಯವೆದ್ದು, ಈಗಾಗಲೇ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಂಸದರು ಬಂಡಾಯದ ಬಾವುಟ ಹಾರಿಸುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ, ಉದ್ಧವ್ ಠಾಕ್ರೆ ಬಿಜೆಪಿಗೆ ಸಪೋರ್ಟ್ ಮಾಡುವ ಮೂಲಕ ಬಂಡಾಯ ಶಮನ ಮಾಡುವ ನಿರ್ಧಾರಕ್ಕೆ ಕೈಹಾಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೋಮವಾರ ಮಾತೋಶ್ರೀಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ 16 ಸಂಸದರು ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ಹೇಳಿಕೊಂಡಿದ್ದಾರೆ, ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ನಾವು ಬೆಂಬಲ ಘೋಷಿಸುವುದಾಗಿ ಇಂದು ನಡೆದ ಸಭೆಯಲ್ಲಿ ತಿಳಿಸಿದ್ದೇವೆಂದು ಶಿವಸೇನೆಯ ಸಂಸದ ಗಜಾನನ ಕೀರ್ತಿಕರ್ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಅವರಿಗೂ ನಾವು ಬೆಂಬಲ ಘೋಷಣೆ ಮಾಡಿದ್ದೆವು. ಬುಡಕಟ್ಟು ಮಹಿಳೆಯಾಗಿರುವ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡಲಿದ್ದು, ಮುಂದಿನ ಎರಡು ದಿನಗಳಲ್ಲಿ ಉದ್ಧವ್ ಠಾಕ್ರೆ ತಮ್ಮ ನಿರ್ಧಾರ ತಿಳಿಸಲಿದ್ದಾರೆ ಎಂದವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಟ್ಟು 18 ಸಂಸದರಿದ್ದು, ಇಂದಿನ ಸಭೆಯಲ್ಲಿ 16 ಎಂಪಿಗಳು ಭಾಗಿಯಾಗಿದ್ದರು.