POLITICS: ದಿಲ್ಲಿ ಹೈಕಮಾಂಡ್ ಗಳಿಗೆ ಕರ್ನಾಟಕ ಲೀಡರ್ ಗಳು ನೀಡುತ್ತಿರುವ ಸಂದೇಶ ಯಾವುದು?
ಸುದ್ದಿ ವಿಶ್ಲೇಷಣೆ
ಅದು ಹಾಗಲ್ಲ, ನೀವು ತಪ್ಪಾಗಿ ಭಾವಿಸುತ್ತಿದ್ದೀರ ಎನ್ನುತ್ತಲೇ ಕರ್ನಾಟಕದ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಭಾವಿ ನಾಯಕರು ಚುನಾವಣೆಗೆ ಮೊದಲೇ ದೆಹಲಿಯಲ್ಲಿ ಕುಳಿತಿರುವ ವರಿಷ್ಠರಿಗೆ ತಮ್ಮ ಮುಂದಿನ ತಯಾರಿಯ ಬಗ್ಗೆ ಸ್ಪಷ್ಟ ಸಂದೇಶವನ್ನು ರವಾನಿಸುತ್ತಲೇ ಇದ್ದಾರೆ. ಹೌದು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆಗೆ ನಡೆಯುತ್ತಿರುವ ಅದ್ದೂರಿ ತಯಾರಿ ಮತ್ತು ಎರಡು ದಿನಗಳಿಂದ ಸದ್ದು ಮಾಡುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗಳು ರಾಜ್ಯ ರಾಜಕೀಯದ ಭವಿಷ್ಯದ ಸೂಚನೆಯನ್ನು ನೀಡುತ್ತಿರುವುದಂತೂ ಹೌದು.
ಒಂದೆಡೆ ಸಿದ್ಧರಾಮಯ್ಯ ನಾನು ಇದುವರೆಗೆ ಬರ್ತ್ ಡೇ ಆಚರಿಸಿಲ್ಲ, ಇದೆಲ್ಲಾ ಅಭಿಮಾನಿಗಳು ಮಾಡುತ್ತಿರುವುದು ಎಂದು ಸ್ಪಷ್ಟಪಡಿಸುತ್ತಿದ್ದಾರೆ. ಆದರೆ ಸಿಎಂ ಆಗುವ ಮೊದಲು ಹಾಗೂ ಕಾಂಗ್ರೆಸ್ ಪ್ರವೇಶದ ಸಂದರ್ಭ ಅವರು ನಡೆಸಿದ ಅಹಿಂದ ಸಮಾವೇಶದ ಬಳಿಕ ಸಿದ್ದರಾಮಯ್ಯ ಕರ್ನಾಟಕದ ಮಾಸ್ ಲೀಡರ್ ಆಗಿ ಪ್ರಖರಗೊಂಡದ್ದು ಇತಿಹಾಸ. ಅದೇ ರೀತಿ ಹುಟ್ಟುಹಬ್ಬ ಆಚರಣೆ ಇರಲಿದೆಯಾ, ದೆಹಲಿ ವರಿಷ್ಠರಿಗೆ ಸಿದ್ದರಾಮಯ್ಯ ಶಕ್ತಿ ಏನು ಎಂಬುದನ್ನು ತೋರಿಸಿಕೊಡುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು.
ಇನ್ನೊಂದೆಡೆ ಬಿಜೆಪಿಯ ಫೈರ್ ಬ್ರಾಂಡ್ ನಾಯಕರೆಂದೇ ಖ್ಯಾತರಾಗಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಗಟ್ಟಿಗೊಳಿಸುತ್ತೇನೆ ಎಂದಿದ್ದ ಬಿಎಸ್ ವೈ, ಕೆಲಕಾಲ ಸುದ್ದಿಯಲ್ಲಿರಲಿಲ್ಲ. ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ತಾನು ಚುನಾವಣೆಗೆ ನಿಲ್ಲೋಲ್ಲ, ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ ನಿಲ್ಲುವ ಕುರಿತು ಮಾತನಾಡಿದ್ದ ಬಿಎಸ್ ವೈ, ಇಂದು ಮತ್ತೆ ಹೇಳಿಕೆ ನೀಡಿ, ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಈ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ, ಆದರೆ ಶಿಕಾರಿಪುರದ ಜನರ ಒತ್ತಾಯ ಹಾಗಿದೆ ಎನ್ನುವ ಮೂಲಕ ದೆಹಲಿ ವರಿಷ್ಠರಿಗೆ ಪ್ರಬಲ ಸಂದೇಶವನ್ನಂತೂ ನೀಡಿದ್ದಾರೆ.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದಾ, ಅಥವಾ ಕಾಂಗ್ರೆಸ್ ಗೆ ಅಧಿಕಾರ ಸಿಗುತ್ತದಾ ಎನ್ನುವುದು ಬೇರೆಯದ್ದೇ ವಿಷಯ.ಆದರೆ ನಾವಿಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಎಚ್.ಡಿ.ಕುಮಾರಸ್ವಾಮಿ ಪಾಳಯಕ್ಕೆ ಸಿದ್ದರಾಮಯ್ಯ ಅಂದರೆ ಅಷ್ಟಕ್ಕಷ್ಟೇ. ಎರಡೂ ಪಕ್ಷಗಳ ದೆಹಲಿ ವರಿಷ್ಠರಿಗೂ ಈಗ ಪರೀಕ್ಷಾ ಪೂರ್ವಸಿದ್ಧತಾ ಕಾಲ.