CRIME: ಒಣಗಲು ಹಾಕಿದ ಅಡಕೆ ಕಳವು ಪ್ರಕರಣ: ಆರೋಪಿ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಎಂಬಲ್ಲಿ ಒಣಗಲು ಹಾಕಿದ 120 ಕೆಜಿ ಅಡಕೆಯನ್ನು ಕಳವು ಮಾಡಿದ ಆರೋಪದಲ್ಲಿ ಮಂಜುನಾಥ ನಾಗರಾಜ ಬೋವಿ (50) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕುರಿತು ಐವನ್ ತೊರಾಸ್ ಎಂಬವರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ತನ್ನ ಅಡಿಕೆ ತೋಟದ ಮಧ್ಯೆದಲ್ಲಿರುವ ಅಂಗಳದಲ್ಲಿ ಒಣಗಲು ಅಡಿಕೆಯನ್ನು ಹಾಕಿದ್ದು, ಸುಮಾರು 120 ಕೆ.ಜಿ ಅಡಿಕೆಯನ್ನು ಯಾರೋ ಕಳ್ಳರು ಡಿ.24 ಮತ್ತು 29ರ ಮಧ್ಯೆ ಕಳವು ಮಾಡಿರುವುದಾಗಿ ದೂರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಶೆಕೋಡಿ ನಿವಾಸಿ ಮಂಜುನಾಥ ನಾಗರಾಜ್ ಭೋವಿ ಎಂಬಾತನನ್ನು ವಶಕ್ಕೆ ಪಡೆದು ಕಳವು ಮಾಡಿದ 105 ಕೆ.ಜಿ. ಅಡಿಕೆ, ಕಳವು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಹಾಗೂ ನಗದು ಹಣವನ್ನು ವಶಪಡಿಸಲಾಗಿದೆ. ಆರೋಪಿಯು ಮಂಗಳೂರು ನಗರದ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.