Election: ಚುನಾವಣೆಯ ‘ಭೂತ’ ಮತ್ತು ವರ್ತಮಾನದ ವಾಸ್ತವ

Election: ಚುನಾವಣೆಯ ‘ಭೂತ’ ಮತ್ತು ವರ್ತಮಾನದ ವಾಸ್ತವ

 

by Harish Mambady

ಚುನಾವಣೆ ಬಂದರೆ ತಲೆಬಿಸಿ ಆಗುವುದು ಯಾರಿಗೆ? ರಾಜಕೀಯ ಪಕ್ಷಗಳು ಯಾವ ರೀತಿ ತಮ್ಮ ಕಾರ್ಯಕರ್ತರನ್ನು ತನು, ಮನ, ಧನಗಳಿಂದ ಜಾಗೃತಗೊಳಿಸಬೇಕು ಎಂಬ ಚಿಂತೆ ಹೊತ್ತರೆ, ಅಧಿಕಾರಿ ವರ್ಗಕ್ಕೆ ತಯಾರಿ ಹೇಗೆ ಮಾಡೋದು ಎಂಬ ಚಿಂತೆ. ಜನರಿಗೆ ತಮ್ಮ ಮನೆ ಹತ್ತಿರವೇ ಇರುವ ಬೂತ್ ಗಳಿಗೆ ತೆರಳಿ ಓಟು ಹಾಕೋದಷ್ಟೇ ಕೆಲಸ. ಆದರೆ ಅದನ್ನೂ ಅವರು ಮಾಡುತ್ತಿಲ್ಲ ಎಂಬ ಟೀಕೆಗಳಿವೆ. ಇದರಲ್ಲಿ ಬಿಲ್ವಿದ್ಯಾ ಪರಿಣತರಿಗೆ ಮಾತ್ರ ಖುಷಿಪಡುತ್ತಾರೆ ಎಂಬ ಲೇವಡಿಗಳನ್ನೂ ಕೇಳುತ್ತೇವೆ.

ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯತ್/ತಾಪಂ, ಗ್ರಾಮ ಪಂಚಾಯತ್, ಪುರಸಭೆ ಚುನಾವಣೆಗಳು ಬಂದಾಗ ಮೊದಲಾಗಿ ತಯಾರಾಗಬೇಕಾದವರು ಚುನಾವಣಾ ಕರ್ತವ್ಯ ಸಿಬ್ಬಂದಿ.

ಸುಮ್ಮನೆ ಲೆಕ್ಕಾಚಾರ ಮಾಡಿ. ಚುನಾವಣೆ ಮತಯಂತ್ರದ ಕುರಿತು ತರಬೇತಿಗೆಂದು ಎರಡು ದಿನ ಕಡ್ಡಾಯವಾಗಿ ಹಾಜರಾಗಲೇಬೇಕು. ಬಳಿಕ ಚುನಾವಣೆಯ ಹಿಂದಿನ ದಿನ ಬೆಳಗ್ಗೆಯೇ ಹಾಜರಾಗಿ ತಮ್ಮ ತಮ್ಮ ಮತಯಂತ್ರಗಳನ್ನು ಹೊತ್ತುಕೊಂಡು ತಮಗೆ ನಿಗದಿಪಡಿಸಿದ ಬೂತ್ ಗಳಿಗೆ ಹೋಗಬೇಕು. ತಾವಿರುವ ಬೂತ್ ಹೇಗಿರುತ್ತದೆ ಎಂಬ ಚಿಂತೆ, ಮಳೆ, ಗಾಳಿ, ಬಿಸಿಲು, ಸೆಖೆ, ಚಳಿ ಎಂದು ಗೊಣಗದೆ ಬೂತ್ ಒಳಗೆ ಪ್ರವೇಶಿಸಬೇಕು. ಹೆಚ್ಚಾಗಿ ಶಾಲೆಗಳನ್ನು ಚುನಾವಣಾ ಬೂತ್ ಗಳನ್ನಾಗಿಸಲಾಗುತ್ತದೆ. ಕೆಲವೆಡೆ ಬಾಗಿಲಿಗೆ ಚಿಲಕವೂ ಇರುವುದಿಲ್ಲ. ಶೌಚಾಲಯದಲ್ಲಿ ನೀರಿರುವುದಿಲ್ಲ. ಹೀಗೆ ಒಂದರ ಮೇಲೆ ಮತ್ತೊಂದು ಸಮಸ್ಯೆಗಳು. ಇವೆಲ್ಲವನ್ನೂ ನಿಭಾಯಿಸಿ, ಮರುದಿನ ಬೆಳಗ್ಗೆ ಆರು ಗಂಟೆಗೆ ಚುನಾವಣಾ ಕರ್ತವ್ಯಕ್ಕೆ ತಯಾರಾಗಿ ನಿಂತಿರಬೇಕು. ಸಂಜೆ ಏಳು ಗಂಟೆವರೆಗೆ ಈ ಜವಾಬ್ದಾರಿ ಮುಗಿಸಿ, ತಮ್ಮ ವಿಭಾಗಗಳಿಗೆ ತೆರಳಿ, ಅಲ್ಲಿ ಅದನ್ನು ನೀಡಿ ಮತ್ತೆ ಮನೆಗಳಿಗೆ ಹೋಗಬೇಕು. ಅಷ್ಟು ಹೊತ್ತಿಗೆ ರಾತ್ರಿಯಾಗಿರುತ್ತದೆ. ತಮ್ಮ ಊರಿಗೆ ತೆರಳುವ ಬಸ್ಸುಗಳು ಗೂಡು ಸೇರಿರುತ್ತವೆ. ಸಂಬಂಧಿಕರನ್ನು ಬೈಕೋ, ಕಾರುಗಳಲ್ಲೋ ಬರಹೇಳಿ ಮನೆಗೆ ಸೇರಿದರೆ ಮುಗೀತು. ಇಲ್ಲವಾದರೆ ಮತ್ತೊಂದು ದಿನ ರೂಮ್ ವಾಸ!!

ಇಷ್ಟರ ನಡುವೆ ನಕಲಿ ಮತದಾನ ಮಾಡುವವರು, ಯತ್ನಿಸುವವರು, ಮತಯಂತ್ರ ಕೆಟ್ಟು ಹೋಗುವುದು, ಇಂಥ ಎಡರು ತೊಡರುಗಳನ್ನು ಸಹಿಸಬೇಕು. ದಿನಾ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಪೊಲೀಸ್ ಸಿಬ್ಬಂದಿಗಾದರೂ ಇಂಥವೆಲ್ಲಾ ಮಾಮೂಲು. ಅದು ಅವರ ಕರ್ತವ್ಯವೂ ಹೌದು. ಆದರೆ ಚುನಾವಣಾ ಸಿಬ್ಬಂದಿಯನ್ನೇ ದೂರುದಾರರನ್ನಾಗಿಸಿ, ಇಂಥ ಘಟನೆಗಳಿಗೆಲ್ಲಾ ಕೇಸು ಹಾಕಿಸಿಕೊಳ್ಳಲಾಗುತ್ತದೆ, ಹಾಕದೇ ಇದ್ದರೆ ಕರ್ತವ್ಯಲೋಪದ ದೂರು ದಾಖಲಾಗುತ್ತದೆ. ಯಾವುದೋ ಊರಿನಲ್ಲಿ ಎರಡನೇ ದರ್ಜೆ ಗುಮಾಸ್ತರಾಗಿಯೋ, ಶಾಲಾ ಶಿಕ್ಷಕರಾಗಿಯೋ ಪಾಠ ಮಾಡುವುದನ್ನು ಮಾಡುತ್ತಿರುವವರೂ ಪೊಲೀಸ್ ಠಾಣೆ ಮೆಟ್ಟಿಲನ್ನು ಆಗಾಗ ಹತ್ತಬೇಕು. ಇದೊಂದು ಎಕ್ಸ್ ಟ್ರಾ ಕೆಲಸ.

ಇದನ್ನೆಲ್ಲಾ ಹೊರಗಿನಿಂದ ನೋಡುವ ಜನರು ಅವರಿಗೇನು, ಟಿಎ, ಡಿಎ ಕೊಡುವುದಿಲ್ಲವೇ ಎನ್ನುತ್ತಾರೆ. ಆದರೆ ಅದರ ಕತೆಯೇ ಬೇರೆ. ಟಿಎ, ಡಿಎ ದೊರಕಬೇಕೆಂದಿದ್ದರೆ ಕೆಲವು ದಿನ, ತಿಂಗಳು ಕಾಯಬೇಕಾದ ಪರಿಸ್ಥಿತಿಯೂ ಉಂಟು.

ಇದರ ಮಧ್ಯೇ ಕೆಲವರು ತಮ್ಮ ಬೂತ್ ಸಂಖ್ಯೆ,ಸ್ಥಳ ತಿಳಿದ ಕೂಡಲೇ ಅಲ್ಲಿ ಸುತ್ತಮುತ್ತ ತಮ್ಮ ಪರಿಚಯದವರು,ನೆಂಟರಿಷ್ಟರು ಇದ್ದಾರಾ ಅಂತ ತಿಳಿದುಕೊಳ್ತಾರೆ. ಕೂಡಲೇ ಕಾರಣಗಳನ್ನು ತಿಳಿಸಿ, ಬೆಳಿಗ್ಗೆ ಬೇಗ ಬರ್ತೇನೆ ಎಂದು ಜಾರಿಕೊಳ್ಳುತ್ತಾರೆ. ಏನಾದರೂ ಹೆಚ್ಚುಕಮ್ಮಿ ಆದರೆ ಅದಕ್ಕೆ ಜವಾಬ್ದಾರಿಯನ್ನು ಪಿಆರ್ ಒ ಹೊರಬೇಕು. ಹೀಗೆ ತಮ್ಮೊಡನೆ ಇರುವ ಸಿಬ್ಬಂದಿ ಬೇರೆಡೆ ತೆರಳಿದರೆ, ಪಿಆರ್ ಒ ಅವರ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಇವರು ಮಾತ್ರ ಬೆಳಗ್ಗೆ ಓಟಿಗೆ ಒಂದು ಗಂಟೆ ಮೊದಲು ನೀಟಾಗಿ ಕಾಫಿ, ತಿಂಡಿ ಸೇವಿಸಿ, ಡ್ರೆಸ್ ಮಾಡಿ ಹಾಜರಾಗುತ್ತಾರೆ!!

ಇದನ್ನು ಮರೆತೆ. ಕೆಲವೆಡೆ ಕಾಫಿ, ತಿಂಡಿಯ ಕತೆ ಕೇಳಿದರೆ ಅದೊಂದು ದೊಡ್ಡ ಮಹಾಕಾವ್ಯವಾದೀತು. ನೀರು ಜಾಸ್ತಿ ಇರುವ ಚಹ, ಬೇಯದ ಅನ್ನ, ಕಳಪೆ ವಾಸನೆ ಬರುವ ಸಾಂಬಾರು, (ಸಾಂಭಾರಿನಲ್ಲಿ ಹಲ್ಲಿ ಬಿದ್ದ ಸುದ್ದಿ ವರದಿಯಾಗಿತ್ತು). ಚುನಾವಣಾ ತರಬೇತಿಯಿಂದ ಹಿಡಿದು, ಮತದಾನದ ದಿನವೂ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಒದಗಿಸುತ್ತಾರೆ. ಇದು ಸಿಬ್ಬಂದಿಗೆ ಗ್ಯಾಸ್ಟ್ರಿಕ್, ಆಸಿಡಿಟಿ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಎರಡು ದಿನವಲ್ಲವೇ ಅಡ್ ಜಸ್ಟ್ ಮಾಡಿ ಎನ್ನುವ ನಾವು ಎರಡು ದಿನ ಕಳಪೆ ಊಟ, ಕಳಪೆ ವಸತಿ, ಕಳಪೆ ವ್ಯವಸ್ಥೆಯಡಿ ಇದ್ದರೆ ಹೇಗಿರುತ್ತದೆ ಎಂದು ಊಹಿಸಿಕೊಳ್ಳಬೇಕು.

ಚುನಾವಣಾ ಮತಗಟ್ಟೆ ಆಯ್ಕೆಗೊಳ್ಳುವ ಮುನ್ನ ಅದು ಸರಿಯಾಗಿದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡುವ ಹೊಣೆಗಾರಿಕೆ ಹೊರುವವರು ಯಾರು? ಪ್ರತಿ ವರ್ಷವೂ ಅದೇ ಮತಗಟ್ಟೆಯಲ್ಲಿ ಅದೇ ಸಮಸ್ಯೆ ಉಳಿಯುವುದು ಹೇಗೆ? ಮತಗಟ್ಟೆಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಲೆಂದು ದೊರಕುವ ಅನುದಾನ ಎಷ್ಟು ಖರ್ಚಾಗುತ್ತದೆ, ಎಷ್ಟು ಗಾಳಿಯಲ್ಲಿ ಮಾಯವಾಗುತ್ತದೆ, ಊಟ, ತಿಂಡಿಗೆಂದು ಒಂದು ಬೂತ್ ಗೆ ನಿಗದಿಯಾಗುವ ಹಣದಲ್ಲಿ ಗುಣಮಟ್ಟದ ಆಹಾರ ತಯಾರಾಗುತ್ತದೆಯಾ ಎಂದು ನೋಡುವವರು ಯಾರು?

ಇವೆಲ್ಲ ಯಕ್ಷಪ್ರಶ್ನೆಗಳು. ಪ್ರಶ್ನಿಸಬೇಕಾದವರು ಜಾಗೃತ ನಾಗರಿಕರು.

(ವಿ.ಸೂ: ಇದು ಉತ್ತಮ ದರ್ಜೆಯ ಕಟ್ಟಡ, ಉತ್ತಮ ಆಹಾರಗಳು ಒದಗಿಸಲಾದ ಬೂತ್ ಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಸಂಕಷ್ಟವಲ್ಲ, ಹಾಗೆ ದೊರಕದ ಸಮಸ್ಯೆ ಅನುಭವಿಸಿದ, ಹೇಳಲೂ ಆಗದ, ಉಗುಳಲೂ, ನುಂಗಲೂ ಆಗದ ಸಮಸ್ಯೆ ಹೊಂದಿದ ಸಿಬ್ಬಂದಿಗಳ ಸಂಕಷ್ಟದ ವಿಚಾರ)

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ