Regional news: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜ.30, 31ರಂದು ತುಳುನಾಡ ಜಾತ್ರೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ 30 ಮತ್ತು 31ರಂದು ಶ್ರೀ ಗುರುದೇವಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ತುಳುನಾಡ ಜಾತ್ರೆ ಶ್ರೀ ಒಡಿಯೂರು ರಥೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಸಾಹಿತಿ, ಕವಿ ಡಾ. ವಸಂತಕುಮಾರ ಪೆರ್ಲ ಅಧ್ಯಕ್ಷತೆಯಲ್ಲಿ ಎರಡು ದಿನ ತುಳು ಸಾಹಿತ್ಯ ಸಮ್ಮೇಳನ ಈ ಸಂದರ್ಭ ನಡೆಯಲಿದೆ.
ಜ.30ರಂದು ಬೆಳಿಗ್ಗೆ ತುಳು ಸಾಹಿತ್ಯ ಸಮ್ಮೇಳನವನ್ನು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳುವೆರೆ ಚಾವಡಿ ಬೆಂಗಳೂರು ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ.ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್‌ನ ಅಧ್ಯಕ್ಷ ರಾಜ್‌ಗೋಪಾಲ ರೈ ಭಾಗವಹಿಸಲಿರುವರು.
ಬೆಳಿಗ್ಗೆ ಗಂಟೆ 11.30ಕ್ಕೆ ಜರಗುವ ತುಳು ತುಲಿಪು ವಿಚಾರಗೋಷ್ಠಿಯಲ್ಲಿ ನೆಲ ಎಂಬ ವಿಚಾರವಾಗಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ, ಜಲದ ಬಗ್ಗೆ ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್, ನಲಿಕೆ-ತೆಲಿಕೆಯ ಬಗ್ಗೆ ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆ ವಿಚಾರ ಮಂಡಿಸಲಿದ್ದಾರೆ.
ಮಧ್ಯಾಹ್ನ ಗಂಟೆ 1,30ರಿಂದ ತುಳು ಜಾನಪದ ನಲಿಕೆ-ತೆಲಿಕೆ ಪಂತೊ-ತುಳು ಜಾನಪದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ ಗಂಟೆ ೬.೩೦ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ’ಪಾವನ ಪವನಾತ್ಮಜ’ ಯಕ್ಷಗಾನ ಬಯಲಾಟ ಇರಲಿದೆ.
ಜ.31ರಂದು ಬೆಳಿಗ್ಗೆ ಗಂಟೆ ೯.೩೦ಕ್ಕೆ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ. ಬಳಿಕ ಗಂಟೆ ೧೦.೩೦ರಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯುವುದು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಮುಂಬೈ ಹೇರಂಭ ಇಂಡಸ್ಟ್ರೀಸ್‌ನ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರುಕನ್ಯಾನ, ಮುಂಬೈನ ಸಂಜೀವನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ರಾವ್, ಮುಂಬೈ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ, ದಯಾನಂದ ಹೆಗ್ಡೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಉಪಸ್ಥಿತರಿರುವರು.
ಹಿರಿಯ ಮೃದಂಗ ವಾದಕ ವಿದ್ವಾನ್ ಬಾಬು ರೈ, ತುಳು ಸಾಹಿತಿ ಡಾ. ಸಾಯಿಗೀತಾ ತೋಕೂರುಗುತ್ತು, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ದತ್ತ ತುಳು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಕ ರಾಮಣ್ಣ ಗೌಡ ಕಣಿಯೂರು ಇವರನ್ನು ’ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ಣ ಗಂಟೆ ೩.೦೦ರಿಂದ ವೈಷ್ಣವಿ ನಾಟ್ಯಾಲಯ (ರಿ.), ಪುತ್ತೂರು ಇವರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ನಿರ್ದೇಶನದಲ್ಲಿ ’ನೃತ್ಯಾರ್ಪಣಮ್’ ಹಾಗೂ ಸಂಜೆ ಗಂಟೆ ೫.೩೦ರಿಂದ ಜರ್ನಿ ಥೇಟರ್ ಗ್ರೂಪ್ (ರಿ.), ಮಂಗಳೂರು ಇವರಿಂದ ಪ್ರೊ. ಅಮೃತ ಸೋಮೇಶ್ವರ ರಚಿಸಿದ, ವಿದ್ದು ಉಚ್ಚಿಲ್ ನಿರ್ದೇಶನದ ಗೋಂದೊಳು ತುಳು ಜಾನಪದ ನಾಟಕ. ರಾತ್ರಿ ಗಂಟೆ ೭.೩೦ರಿಂದ ಶ್ರೀ ದತ್ತಾಂಜನೇಯ ದೇವರ ರಥೋತ್ಸವ ನಡೆಯಲಿದೆ ಎಂದು ಒಡಿಯೂರು ಕ್ಷೇತ್ರದ ಪ್ರಕಟಣೆ ತಿಳಿಸಿದೆ.